ಜೀವನಾಧಾರ ಆರ್ಥಿಕತೆ -
ಜೀವನಾಧಾರ ಆರ್ಥಿಕತೆಯನ್ನು ಕುರಿತಂತೆ ಎರಡು ಪರಿಕಲ್ಪನೆಗಳುಂಟು: 1 ಉತ್ಪಾದನೆಗೆ ಸಂಬಂಧಿಸಿದಂತೆ, 2 ಜನರ ಜೀವನಮಟ್ಟಕ್ಕೆ ಸಂಬಂಧಿಸಿದಂತೆ. ಒಂದು ಆರ್ಥಿಕತೆಯಲ್ಲಿರುವ ಪ್ರತಿಯೊಂದು ಆರ್ಥಿಕತೆ ಘಟಕವೂ (ಉದಾ: ಕುಟುಂಬ, ಗ್ರಾಮ) ಸ್ವಾವಲಂಬಿಯಾಗಿದ್ದು, ತನಗೆ ಆವಶ್ಯಕವಾದ ಎಲ್ಲ ವಸ್ತುಗಳನ್ನು ತಾನೇ ಉತ್ಪಾದಿಸುತ್ತಿದ್ದರೆ ಅದನ್ನು ಜೀವನಾಧಾರ ಆರ್ಥಿಕತೆ ಎನ್ನಲಾಗುತ್ತದೆ. ಅದರಲ್ಲಿ ಪದಾರ್ಥ ಮತ್ತು ಸೇವೆಗಳ ವಿನಿಮಯದ ಆವಶ್ಯಕತೆ ಇರುವುದಿಲ್ಲ. ಆಗ ಸ್ವಾಭಾವಿಕವಾಗಿ ಹಣದ ವ್ಯವಸ್ಥೆ ಅಲ್ಲಿ ಅಸ್ತಿತ್ವದಲ್ಲಿರುವುದಿಲ್ಲ. ಒಂದು ಆರ್ಥಿಕತೆಯಲ್ಲಿ ಜನರು ಜೀವಿಸುವುದಕ್ಕೆ ಕನಿಷ್ಠ ಅಗತ್ಯವಾದ ಮಟ್ಟ ಯಾವುದೋ ಆ ಮಟ್ಟವನ್ನು ಅವರು ಅನುಸರಿಸುತ್ತಿದ್ದರೆ ಅದನ್ನೂ ಜೀವನಾಧಾರ ಆರ್ಥಿಕತೆ ಎಂದು ಕರೆಯುವುದುಂಟು. ಇಂಥ ಆರ್ಥಿಕತೆಯಲ್ಲಿಯ ಸಾಧನಸಂಪತ್ತೂ ತಾಂತ್ರಿಕಜ್ಞಾನವೂ ಜನಜೀವನಕ್ಕೆ ಕನಿಷ್ಠವಾಗಿ ಅಗತ್ಯವಾದ ಆವಶ್ಯಕವಸ್ತುಗಳನ್ನು ಉತ್ಪಾದಿಸುವುದಕ್ಕೆ ಮಾತ್ರ ಅನುಕೂಲಕರವಾಗಿರುತ್ತವೆಯೇ ಹೊರತು ಅವುಗಳಿಂದ ಉತ್ಪಾದನೆಯ ಹೆಚ್ಚಳ (ಸಪ್ರ್ಲಸ್) ಸಾಧ್ಯವಿರುವುದಿಲ್ಲ. ಜೀವನಾಧಾರ ಆರ್ಥಿಕತೆ ಮೊದಲನೆಯ ಅರ್ಥದಲ್ಲೆ ಹೆಚ್ಚಾಗಿ ಬಳಕೆಯಲ್ಲಿದೆ.

	ಉತ್ಪಾದನ ಸಂಬಂಧಿ ಜೀವನಾಧಾರ ಆರ್ಥಿಕತೆಯನ್ನು ಆರ್ಥಿಕತೆಯಲ್ಲಿಯ ಸ್ವಾವಲಂಬನೆ ಅಥವಾ ವಿನಿಮಯದ ಮಟ್ಟಕ್ಕೆ ಅನುಗುಣವಾಗಿ ಶುದ್ಧ ಜೀವನಾಧಾರ ಆರ್ಥಿಕತೆ ಮತ್ತು ಮಿಶ್ರ ಅಥವಾ ಅಪೂರ್ಣ ಜೀವನಾಧಾರ ಆರ್ಥಿಕತೆ ಎಂದು ವಿಂಗಡಿಸಬಹುದು. ಸಂಪೂರ್ಣ ಸ್ವಾವಲಂಬನೆಯಿರುವಂಥದು ಶುದ್ಧ ಜೀವನಾಧಾರ ಆರ್ಥಿಕತೆ. ಇಲ್ಲಿ ವಿನಿಮಯವೇ ಇರುವುದಿಲ್ಲ. ಆದರೆ ಮಿಶ್ರ ಜೀವನಾಧಾರ ಆರ್ಥಿಕತೆಯಲ್ಲಿ ಸ್ವಾವಲಂಬನೆ, ವಿನಿಮಯ ಇವೆರಡೂ ಇಷ್ಟಷ್ಟು ಪ್ರಮಾಣಗಳಲ್ಲಿ ಕಂಡುಬರುತ್ತವೆ.

	ಶುದ್ಧ ಜೀವನಾಧಾರ ವ್ಯವಸ್ಥೆಯ ಮುಖ್ಯ ಲಕ್ಷಣಗಳು ಇವು: 1. ಉತ್ಪಾದನೆ ಸ್ವಂತ ಬಳಕೆಗೇ ಹೊರತು ವಿನಿಮಯಕ್ಕಾಗಿ ಅಲ್ಲ. 2. ಉತ್ಪಾದನ ಪ್ರಕ್ರಿಯೆಯಲ್ಲಿ ತೀರ ಕೆಳಮಟ್ಟದ ತಾಂತ್ರಿಕ ಜ್ಞಾನ ಪ್ರಯೋಗಿಸಲ್ಪಡುತ್ತದೆ. ಕುಟುಂಬದ ಸಾಧನಸಂಪತ್ತಾದ ಶ್ರಮ ಮತ್ತು ಬಂಡವಾಳವನ್ನಷ್ಟೇ ಬಳಸಲಾಗುತ್ತದೆ. ಆದ್ದರಿಂದ ಉತ್ಪಾದನೆಯಲ್ಲಿ ಹೆಚ್ಚಳ ಉಂಟಾಗುವ ಸಂಭವ ಕಡಿಮೆ. 3. ಉತ್ಪಾದನೆಯನ್ನು ಕೈಗೊಳ್ಳುವುದು ಮೂಲತಃ ಸ್ವಂತ ಅನುಭೋಗಕ್ಕಾದ್ದರಿಂದ ಮತ್ತು ಅದರಲ್ಲಿ ಹೆಚ್ಚಳ ಇರುವುದಿಲ್ಲವಾದ್ದರಿಂದ ಸರಕು ವಿನಿಮಯ ಇರುವುದಿಲ್ಲ. ಆ ಕಾರಣದಿಂದಾಗಿ ಮಾರುಕಟ್ಟೆಯಾಗಲಿ ಹಣದ ಬಳಕೆಯಾಗಲಿ ಇರದು. ಆದ್ದರಿಂದ ಅದು ಹಣದ ಆರ್ಥಿಕತೆಯಾಗಿರುವುದಿಲ್ಲ. ಒಟ್ಟಿನಲ್ಲಿ ಶುದ್ಧ ಜೀವನಾಧಾರ ಆರ್ಥಿಕತೆಯಲ್ಲಿ ಉತ್ಪಾದನೆ ಮತ್ತು ಅನುಭೋಗ ಆಂತರಿಕವಾಗಿ ಏಕೀಭವಿಸಿರುತ್ತವೆ. ಶುದ್ಧ ಜೀವನಾಧಾರ ಆರ್ಥಿಕತೆ ಈಗ ಕಾಣದೊರೆಯುವುದಿಲ್ಲ. ಆರ್ಥಿಕಜೀವನ ವಿಕಾಸದ ಪ್ರಥಮಘಟ್ಟಗಳಾದ ಬೇಟೆಯ ಯುಗ, ಪಶುಪಾಲನೆಯ ಯುಗ ಮತ್ತು ಜೀವನಾಧಾರ ಕೃಷಿಯುಗಗಳಲ್ಲಿ ಮಾತ್ರ ಮೇಲೆ ವಿವರಿಸಿದ ಲಕ್ಷಣಗಳನ್ನು ಕಾಣಬಹುದಿತ್ತು.

	ಈಗ ಕಂಡುಬರುವ ಜೀವನಾಧಾರ ಆರ್ಥಿಕತೆಗಳು ಸಂಪೂರ್ಣ ಸ್ವಾವಲಂಬಿಗಳೂ ಅಲ್ಲ, ಸಂಪೂರ್ಣ ಪರಾವಲಂಬಿಗಳಾಗಿದ್ದು ವಿನಿಮಯ ಆರ್ಥಿಕತೆ ಉಳ್ಳಂಥವೂ ಅಲ್ಲ. ಇವುಗಳಲ್ಲಿ ಸ್ವಾವಲಂಬನೆ, ವಿನಿಮಯ ಎರಡೂ ಒಂದೊಂದು ಪ್ರಮಾಣದಲ್ಲಿ ಮಿಶ್ರವಾಗಿರುತ್ತವೆ. ಮಿಶ್ರ ಜೀವನಾಧಾರ ಆರ್ಥಿಕತೆಗಳಲ್ಲಿ ಉತ್ಪಾದನೆಯ ಒಂದು ಭಾಗ ಸ್ವಂತ ಅನುಭೋಗಕ್ಕಾಗಿ, ಇನ್ನೊಂದು ಭಾಗ ಮಾರುಕಟ್ಟೆಗಾಗಿ. ಆದ್ದರಿಂದ ಹಣವನ್ನು ಆಧರಿಸಿದ ವಿನಿಮಯಪದ್ಧತಿಯೂ ಜಾರಿಗೆ ಬರುತ್ತದೆ. ಉತ್ಪಾದನೆಯಲ್ಲಿ ಸ್ವಲ್ಪ ಉತ್ತಮ ಮಟ್ಟದ ತಾಂತ್ರಿಕತೆ ಬಳಕೆಯಲ್ಲಿರುತ್ತದೆ. ಕುಟುಂಬದ ಸಾಧನಸಂಪತ್ತನ್ನೂ ಪ್ರಯೋಗಿಸಲಾಗುತ್ತದೆ. ಈ ಕಾರಣದಿಂದ ಉತ್ಪಾದನೆಯ ಹೆಚ್ಚಳವೂ ವಿನಿಮಯವೂ ಸಾಧ್ಯ.

	ಮೇಲೆ ಹೇಳಿರುವ ಲಕ್ಷಣಗಳಿರುವ ಮಿಶ್ರ ಜೀವನಾಧಾರ ಆರ್ಥಿಕತೆಗಳನ್ನು - ಈ ಲಕ್ಷಣಗಳಿರುವ ಪ್ರಮಾಣಗಳಿಗೆ ಅನುಗುಣವಾಗಿ-ಎರಡು ಗುಂಪುಗಳನ್ನಾಗಿ ಪ್ರೊ.ಮಿಂಟ್ ವಿಂಗಡಿಸಿದ್ದಾರೆ, ಹಿಂದುಳಿದ ರೈತವಾರಿ ಆರ್ಥಿಕತೆಗಳದು (ಪೆಸೆಂಟ್ ಎಕಾನೊಮಿ) ಮೊದಲನೆಯ ಗುಂಪು. ಆಫ್ರಿಕದ, ಲ್ಯಾಟಿನ್ ಅಮೆರಿಕದ ಮತ್ತು ಭಾರತ, ಪಾಕಿಸ್ತಾನ ಮುಂತಾದ ಏಷ್ಯನ್ ರಾಷ್ಟ್ರಗಳ ಆರ್ಥಿಕತೆಗಳು ಉದಾಹರಣೆಗಳು. ಮುಂದುವರಿದ ರೈತವಾರಿ ಆರ್ಥಿಕತೆಗಳು ಇನ್ನೊಂದು ಗುಂಪು. ಬರ್ಮ, ಥೈಲೆಂಡ್, ಘಾನ ಮುಂತಾದ ದೇಶಗಳ ಆರ್ಥಿಕತೆಗಳು ಈ ಗುಂಪಿನಲ್ಲಿ ಸೇರುತ್ತವೆ. ಮೊದಲನೆಯ ಗುಂಪಿನ ಆರ್ಥಿಕತೆಗಳ ಮೂಲಭೂತ ಲಕ್ಷಣಗಳು ಇವು : ರೈತವಾರಿ ಕುಟುಂಬಗಳು ತಮ್ಮ ಜೀವನಾಧಾರಕ್ಕೂ ಮಿಗಿಲಾಗಿ ಉತ್ಪಾದಿಸಿ ಗೃಹಮಾರುಕಟ್ಟೆಯಲ್ಲೋ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೋ ತಮ್ಮ ಹೆಚ್ಚಳದ ಉತ್ಪನ್ನವನ್ನು ಮಾರುತ್ತವೆ. ಈ ಮೂಲಕ ಆರ್ಥಿಕತೆಯಲ್ಲಿ ವಿನಿಮಯದ ಹಾಗೂ ಹಣದ ಕ್ಷೇತ್ರವನ್ನು ವಿಸ್ತರಿಸುತ್ತವೆ. ತಮ್ಮ ಜೀವನ ನಿರ್ವಹಣೆಗೆ ಬೇಕಾದ ವಸ್ತುಗಳನ್ನು ಉತ್ಪಾದಿಸಿ, ಉಳಿದ ಬಿಡುವಿನ ಕಾಲದಲ್ಲಿ ವಿನಿಮಯಕ್ಕಾಗಿ ನಗದು ದೊರಕಿಸಿಕೊಡುವಂಥ ವಸ್ತುಗಳನ್ನು ಬೆಳೆಯುತ್ತವೆ. ಆಫ್ರಿಕದ ಮತ್ತು ಲ್ಯಾಟಿನ್ ಅಮೆರಿಕದ ಬಹುತೇಕ ರೈತವಾರಿ ಆರ್ಥಿಕತೆಗಳು ಇಂಥವು. ಇವುಗಳಲ್ಲಿ ಸೇ.50-ಸೇ.70ರಷ್ಟು ಸಾಧನಸಂಪತ್ತನ್ನು ಜೀವನಾಧಾರ ವಸ್ತುಗಳ ಉತ್ಪಾದನೆಗಾಗಿ ತೊಡಗಿಸಲಾಗಿರುತ್ತದೆ. ಜೀವನಾಧಾರ ಕ್ಷೇತ್ರವೇ ಇಲ್ಲಿ ಪ್ರಬಲ. ಇದಕ್ಕೆ ಮಾರುಕಟ್ಟೆ ಸೌಲಭ್ಯಗಳೂ ಸಾರಿಗೆಸಂಪರ್ಕಗಳೂ ಸಾಕಷ್ಟು ಪ್ರಮಾಣದಲ್ಲಿ ಇಲ್ಲದಿರುವುದೇ ಕಾರಣ. ಈ ಆರ್ಥಿಕತೆಗಳೊಡನೆ ಅತ್ಯಧಿಕ ಜನಸಂಖ್ಯೆ ಉಳ್ಳ ಭಾರತ, ಪಾಕಿಸ್ತಾನ ಮುಂತಾದ ಏಷ್ಯನ್ ರಾಷ್ಟ್ರಗಳ ಆರ್ಥಿಕತೆಗಳನ್ನು ಹೋಲಿಸಿ ನೋಡಬಹುದು. ಇವುಗಳಲ್ಲಿ ಹಣ ವ್ಯವಸ್ಥೆ ಇಲ್ಲವೆಂದರ್ಥವಲ್ಲ. ಜೀವನಾಧಾರ ಕ್ಷೇತ್ರಗಳನ್ನು ಬಿಟ್ಟು ಇತರ ಕ್ಷೇತ್ರಗಳಲ್ಲಿ ಮುಂದುವರಿದ ಹಾಗೂ ಜಟಿಲವಾದ ಆರ್ಥಿಕ ಮತ್ತು ಹಣದ ಕ್ಷೇತ್ರಗಳ ರಚನೆಯನ್ನು ಕಾಣಬಹುದು. ಜೊತೆಗೆ ಅಭಿವೃದ್ಧಿ ಹೊಂದಿದ ಸಾರಿಗೆ ಸಂಪರ್ಕಗಳೂ ಸಾಕಷ್ಟು ಪ್ರಮಾಣದಲ್ಲಿವೆ. ಆದರೂ ಈ ಆರ್ಥಿಕತೆಗಳಲ್ಲಿ ಜೀವನಾಧಾರಿ ಕ್ಷೇತ್ರವಿದೆ. ಜನಸಂಖ್ಯೆ ಅತ್ಯಧಿಕ ದರದಲ್ಲಿ ಬೆಳೆಯುವುದರಿಂದಲೂ ಪರ್ಯಾಯ ಉದ್ಯೋಗಾವಕಾಶಗಳಿಲ್ಲದ್ದರಿಂದಲೂ ಹೆಚ್ಚಳದ ಜನಸಂಖ್ಯೆ ಕೃಷಿಕ್ಷೇತ್ರದಲ್ಲೇ ಜೀವನೋಪಾಯವನ್ನು ಕಂಡುಕೊಳ್ಳುವ ಪ್ರವೃತ್ತಿ ಹೊಂದಿರುತ್ತದೆ. ಆದ್ದರಿಂದ ಕೃಷಿಕ್ಷೇತ್ರದಲ್ಲಿ ಜನಸಂಖ್ಯೆಯ ಒತ್ತಡ ಹೆಚ್ಚಾಗಿ, ಉತ್ಪತ್ತಿಸಾಮಥ್ರ್ಯ ತೀರ ಕಡಿಮೆಯಾಗಿರುತ್ತದೆ. ಹೆಚ್ಚಳದ ಉತ್ಪನ್ನವನ್ನು ಉತ್ಪಾದಿಸುವ ಸಾಧ್ಯತೆ, ಸಾಮಥ್ರ್ಯ ಇಲ್ಲದ್ದರಿಂದ ಹಣದ ಆರ್ಥಿಕತೆಯಲ್ಲಿ ಕೃಷಿಕಾರ ಕಾಲಿಡದಂತಾಗಿದೆ.

	ಆದರೆ ಬರ್ಮ, ಥೈಲೆಂಡ್, ಘಾನ ಮುಂತಾದ ಮುಂದುವರಿದ ರೈತವಾರಿ ಆರ್ಥಿಕತೆಗಳ ಪರಿಸ್ಥಿತಿಯೇ ಬೇರೆ. ಈ ಆರ್ಥಿಕತೆಗಳಲ್ಲಿ ಸಾರಿಗೆಸಂಪರ್ಕಗಳಿಲ್ಲದಿಲ್ಲ. ಜನಸಂಖ್ಯೆಯ ಒತ್ತಡ ಇವುಗಳ ಕೃಷಿಕ್ಷೇತ್ರಗಳ ಮೇಲೆ ಅಷ್ಟಾಗಿ ಇಲ್ಲ. ಈ ಕಾರಣದಿಂದ ಇವುಗಳಲ್ಲಿ ಹಣದ ಕ್ಷೇತ್ರ ವಿಸ್ತರಿಸುವ ಹಾಗೂ ಜೀವನಾಧಾರ ಕ್ಷೇತ್ರ ಸಂಕುಚಿತಗೊಳ್ಳುವ ಅನುಕೂಲ ಏರ್ಪಟ್ಟಿದೆ. ಈ ಆರ್ಥಿಕತೆಗಳಲ್ಲಿ ಸುಮಾರು ಕಾಲುಭಾಗದಷ್ಟು ಸಾಧನಸಂಪತ್ತು ಜೀವನಾಧಾರ ಕ್ಷೇತ್ರದಲ್ಲಿ ವಿನಿಯೋಜಿಸಲ್ಪಟ್ಟಿದ್ದರೂ ಬಹುಪಾಲಿನ ರೈತಕುಟುಂಬಗಳು ರಫ್ತಿಗಾಗಿಯೇ ಉತ್ಪಾದಿಸುವುದರಲ್ಲಿ ತಮ್ಮ ಪೂರ್ಣಕಾಲವನ್ನೂ ಸಾಧನಸಂಪತ್ತನ್ನೂ ವಿನಿಯೋಜಿಸುತ್ತವೆ. ಈ ಕುಟುಂಬಗಳು ಹಣಆರ್ಥಿಕತೆಗೆ ಒಳಪಟ್ಟಿರುತ್ತವೆ. ಹಣಆರ್ಥಿಕತೆ ವಿದೇಶೀ ವ್ಯಾಪಾರಕ್ಕೆ ಸೀಮಿತಗೊಳ್ಳದೆ ಇತರ ಕ್ಷೇತ್ರಗಳಿಗೂ ವಿಸ್ತರಿಸಿಕೊಂಡಿದೆ. ರಫ್ತಿಗಾಗಿಯೇ ಉತ್ಪಾದಿಸುವ ರೈತಕುಟುಂಬಗಳು ತಮ್ಮ ಜೀವನಾಧಾರ ವಸ್ತುಗಳನ್ನು ಇತರ ರೈತಕುಟುಂಬಗಳಿಂದ ಕೊಂಡುಕೊಳ್ಳಬೇಕಾಗುತ್ತದೆ. ಈ ಎರಡನೆಯ ಗುಂಪಿನ ಕುಟುಂಬಗಳು ಆಹಾರಧಾನ್ಯಗಳನ್ನು ಉತ್ಪಾದಿಸುವುದರಲ್ಲೇ ಮಗ್ನವಾಗಿ ತಮ್ಮ ಹೆಚ್ಚುವರಿ ಧಾನ್ಯಗಳನ್ನು ಮಾರಿ ತಾವೂ ಹಣ ಆರ್ಥಿಕತೆಗೆ ಸೇರಿಕೊಂಡಿರುತ್ತವೆ. ಇದರಿಂದ ಹಣ ಆರ್ಥಿಕತೆ ವಿದೇಶೀ ವ್ಯಾಪಾರ ಕ್ಷೇತ್ರದಿಂದ ಒಳನಾಡಿನ ವ್ಯಾಪಾರ ಕ್ಷೇತ್ರಕ್ಕೂ ಹರಡಿಕೊಂಡಿದೆ.

	ರೈತವಾರಿ ಆರ್ಥಿಕತೆಗಳಲ್ಲಿ ಮಾತ್ರ ಇಂದು ಶುದ್ಧ ಜೀವನಾಧಾರ ಆರ್ಥಿಕತೆಯನ್ನು ಹೋಲುವ ವ್ಯವಸ್ಥೆ ಕಂಡುಬರುತ್ತದೆ. ಇಲ್ಲಿ ಜೀವನಾಧಾರ ಆರ್ಥಿಕತೆ ಸಾಮಾನ್ಯವಾಗಿ ಕೃಷಿಕ್ಷೇತ್ರದಲ್ಲಿ ಸೀಮಿತಗೊಂಡಿರುತ್ತದೆ. ಇವನ್ನು ಜೀವನಾಧಾರದ ಘಟ್ಟದಿಂದ ಹೆಚ್ಚುವರಿ ಉತ್ಪಾದಿಸುವ ಘಟ್ಟಕ್ಕೆ ಪರಿವರ್ತನೆಗೊಳಿಸುವುದರಲ್ಲಿ ಅನುಕೂಲವುಂಟು. ಆದರೆ ಇದಕ್ಕೆ ಸಾರಿಗೆಸಂಪರ್ಕಗಳನ್ನು ಅಭಿವೃದ್ಧಿಗೊಳಿಸುವುದಲ್ಲದೆ ರೈತ ಹೆಚ್ಚುವರಿ ಉತ್ಪನ್ನವನ್ನು ಉತ್ಪಾದಿಸುವಂಥ ಪರಿಸರವನ್ನು ಸೃಷ್ಟಿಸುವುದು ಆವಶ್ಯಕ. ಅಧಿಕ ಜನಸಂಖ್ಯೆಯ ಒತ್ತಡವಿರುವ ಆರ್ಥಿಕತೆಗಳಲ್ಲಿಯ ಹೆಚ್ಚುವರಿ ರೈತರನ್ನು ಇತರ ಕ್ಷೇತ್ರಗಳಿಗೆ ವರ್ಗಾಯಿಸಿ, ಕೃಷಿಕ್ಷೇತ್ರದ ಉತ್ಪತ್ತಿಸಾಮಥ್ರ್ಯವನ್ನು ಹೆಚ್ಚಿಸಬೇಕು. ರೈತ ಜೀವನಾಧಾರ ಗಾತ್ರದ ಉತ್ಪನ್ನವನ್ನು ಮಾತ್ರ ಉತ್ಪಾದಿಸುವುದರಲ್ಲಿ ತೃಪ್ತಿ ಕಾಣುತ್ತಾನೆ. ಇದಕ್ಕೆ ಅವನ ಬಯಕೆಗಳು ಪರಿಮಿತವಾಗಿರುವುದೇ ಕಾರಣ. ಅವನಲ್ಲಿ ಹೊಸ ಬಯಕೆಗಳನ್ನು ಸೃಷ್ಟಿಸಿ, ಅವನು ಕೈಗಾರಿಕಾ ಸರಕುಗಳನ್ನೂ ಆಧುನಿಕ ಸಮಾಜ ಒದಗಿಸುವ ಸೇವೆಗಳನ್ನು ಅನುಭೋಗಿಸುವಂತೆ ಮಾಡಿದರೆ ಬಹುಶಃ ಅವನು ಹೆಚ್ಚುವರಿ ಉತ್ಪನ್ನವನ್ನು ಉತ್ಪಾದಿಸಿ ಅದನ್ನು ವಿನಿಮಯ ಮಾಡುವುದು ಪ್ರಯೋಜನಕರವೆಂಬುದನ್ನು ಮನಗಾಣಬಹುದು. 
(ಎ.ಬಿ.ಎ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ